ನಾನಾಲಾಲ್ ದಲಪತರಾಮ
1877-1946. ಪ್ರಸಿದ್ಧ ಗುಜರಾತೀ ಕವಿಗಳಲ್ಲಿ ಒಬ್ಬ. ಹುಟ್ಟಿದ್ದು ಅಹಮದಾಬಾದಿನಲ್ಲಿದ್ದ ಸ್ವಾಮಿನಾರಾಯಣ ಪಂಥದ ಶ್ರೀಮಾಲೀ ಬ್ರಾಹ್ಮಣಕುಲದಲ್ಲಿ. ತಂದೆ ಪ್ರಸಿದ್ಧ ಕವಿಯಾಗಿದ್ದ ದಲಪತರಾಮ. ಬಾಲ್ಯದಲ್ಲಿ ನಾನಾಲಾಲ್ ಬಹಳ ತುಂಟನಾಗಿದ್ದ. ಮೌರ್ವೀಯಲ್ಲಿದ್ದ ಕಾಶೀರಾಮ ದವೇಯವರ ಬಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಗುಜರಾತ್ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ನಡೆಸಿ ಮುಂಬಯಿಯಲ್ಲಿನ ಎಲ್‍ಫಿನ್‍ಸ್ಟನ್ ಮಹಾವಿದ್ಯಾಲಯದಿಂದ ಎಂ.ಎ. ಪದವಿ ಪಡೆದ (1901). ಸುಮಾರು 20 ವರ್ಷ ಸರ್ಕಾರಿ ನೌಕರಿಯಲ್ಲಿದ್ದು 1921ರಲ್ಲಿ ಅದಕ್ಕೆ ಶರಣುಹೊಡೆದು ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ. ಅದಕ್ಕೂ ಬಹಳ ಕಾಲ ಅಂಟಿಕೊಳ್ಳದೆ ಸಾಹಿತ್ಯಸೃಷ್ಟಿಯತ್ತ ಮನಸ್ಸನ್ನು ಹರಿಸಿದ. ಮೊದಲಿಂದಲೂ ಈತನ ಒಲವು ಕವಿತೆ ಬರೆಯುವ ಕಡೆಗೆ. ಕಾಲೇಜಿನಲ್ಲಿರುವಾಗಲೇ ಹಲವು ಕವಿತೆಗಳನ್ನು ರಚಿಸಿದ್ದ.  ಸ್ವತಂತ್ರ ಕಾವ್ಯ ಎನ್ನುವಷ್ಟು ಸುಂದರವಾಗಿ ಸಂಸ್ಕøತದಿಂದ ಗುಜರಾತೀ ಭಾಷೆಗೆ ಭಗವದ್ಗೀತೆ, ಮೇಘದೂತ ಮೊದಲಾದವನ್ನು ಅನುವಾದಿಸಿದ್ದ. ಕಾದಂಬರಿ, ಕಥೆ, ನಿಬಂಧ ಹಾಗೂ ನಾಟಕ ಪ್ರಕಾರಗಳಲ್ಲೂ ಈತ ಕೈಯಾಡಿಸಿದ್ದಾನಾದರೂ ಈತ ಪ್ರಸಿದ್ಧನಾಗಿರುವುದು ಮಹಾಕವಿಯೆಂದೇ.
ಪ್ರಾರಂಭದಲ್ಲಿ ಗರ್ಬಾ, ರಾಸ, ಗಜಲ್ ಛಂದಸ್ಸುಗಳಲ್ಲಿ ಕವಿತೆ ರಚಿಸಿದ ಮೇಲೆ 1926ರಲ್ಲಿ ಮಹಾಕಾವ್ಯವೊಂದನ್ನು ಬರೆಯಲು ಆರಂಭಿಸಿದ. ಕುರುಕ್ಷೇತ್ರ ಎಂಬ ಕಾವ್ಯವನ್ನು ರಚಿಸಲು ಸುಮಾರು 14 ವರ್ಷ ಹಿಡಿಯಿತು. ತರುವಾಯ ಪ್ರೇಮಕುಂಜ ಎಂಬ ಮಹಾಕಾವ್ಯ ಹೊರಬಂತು. ಭಾಗವತಪುರಾಣ ಕಥೆಯನ್ನು ಆಧರಿಸಿದ ಹರಿಸಂಹಿತಾ ಎಂಬ ಮಹಾಕಾವ್ಯ ಮಾತ್ರ ಈತನ ನಿಧನದಿಂದಾಗಿ ಅಪೂರ್ಣವಾಗೇ ಉಳಿಯಿತು.

ನಾನಾಲಾಲ್ ಬರೆಯಲು ಆರಂಭಿಸಿದ ವೇಳೆ ಗುಜರಾತೀ ಭಾಷೆಯಲ್ಲಿ ಒಂದು ವಿಶೇಷ ಕ್ರಾಂತಿಯೇ ಘಟಿಸಿತು. ಈತನ ಕಾವ್ಯದಲ್ಲಿನ ನಾವೀನ್ಯ, ರಸಿಕತೆ, ದೇಶಭಕ್ತಿ ಇತ್ಯಾದಿಗಳು ಜನರನ್ನು ಮುಗ್ಧಗೊಳಿಸಿದ್ದವು. ಇತರ ಸಮಕಾಲೀನ ಕವಿಗಳ ಕೃತಿಗಳನ್ನು ನಿಸ್ತೇಜಗೊಳಿಸಿದವು. ಸಂಸ್ಕøತ, ಇಂಗ್ಲಿಷ್, ಪಾರಸಿ ಹಾಗೂ ಪ್ರಾಚೀನ ಗೂರ್ಜರ ಸಾಹಿತ್ಯದ ಪ್ರಭಾವ ಈತನ ಮೇಲೆ ಆಗಿರುವುದನ್ನು ಎಲ್ಲ ಕಾವ್ಯಗಳಲ್ಲೂ ಕಾಣಬಹುದು. ಈತ ಸ್ವತಃ ಸಂಸ್ಕøತ ಹಾಗೂ ಪಾರಸಿ ಭಾಷೆಯಲ್ಲಿ ವಿಶೇಷ ಪ್ರಾವೀಣ್ಯ ಪಡೆದಿದ್ದ. ಶಬ್ದಲಾಲಿತ್ಯ, ರಸಪೂರ್ಣತೆ, ಸೌಂದರ್ಯದರ್ಶನ-ಇವು ಈತನ ಕಾವ್ಯಗಳಲ್ಲಿ ಎದ್ದುಕಾಣುತ್ತದೆ. ಈತ ತನ್ನ ಕಾವ್ಯಗಳಲ್ಲಿ ಧರ್ಮ, ಈಶ್ವರಭಕ್ತಿ, ಮಾನವಕುಲದ ಅಭಿವೃದ್ಧಿ, ಆಶಾವಾದ, ಸೌಂದರ್ಯಪ್ರಜ್ಞೆ ಇತ್ಯಾದಿಗಳನ್ನು ಪಾತ್ರಗಳ ಮೂಲಕ ಸುಂದರವಾಗಿ ಚಿತ್ರಿಸಿದ್ದಾನೆ; ಅಂತೆಯೇ ಆಧುನಿಕ ಗುಜರಾತೀ ಸಾಹಿತ್ಯದಲ್ಲಿ ಒಬ್ಬ ದ್ರಷ್ಟಾರ ಕವಿಯೆಂದು ಖ್ಯಾತನಾಗಿದ್ದಾನೆ. 		
	     (ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ